ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗರು ಲಿಂಗಾನಂದ ಸ್ವಾಮೀಜಿಯವರು ವಿಶ್ವಗುರು ಬಸವಣ್ಣನವರು ಹುಟ್ಟಿದ ನಾಡಿನಲ್ಲಿ ಮಣಿಗವಳ್ಳಿಯ ಮಾಣಿಕ್ಯವಾಗಿ ದಿನಾಂಕ 15-09-1931 ರಂದು ಜನಿಸಿ. ಬಿ.ಎ. ಆನರ್ಸ್ ಪದವೀಧರರಾಗಿ ಬಸವಗುರುವಿನ ಪ್ರೇರಣೆಯಿಂದ 25-04-1955 ರಂದು ಆಧ್ಯಾತ್ಮಿಕ ಮಾನಸಾಂತರ ಹೊಂದಿ 19-11-1956 ರಂದು ಜ್ಞಾನ ಸನ್ಯಾಸವನ್ನು ಸ್ವೀಕರಿಸಿ ಅಂದಿನಿಂದ ಕೊನೆಯವರೆಗೆ ಒಂದು ದಿನವೂ ಬಿಡದಂತೆ ಪ್ರವಚನದ ಮೂಲಕ ಜ್ಞಾನ ದಾಸೋಹ ಮಾಡುತ್ತಿದ್ದಂತಹ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜದ್ಗುರು ಲಿಂಗಾನಂದ ಸ್ವಾಮೀಜಿಯವರನ್ನು ಪ್ರವಚನ ಪಿತಾಮಹ, ಅಪೂರ್ವವಾಗ್ಮಿ, ಪ್ರತಿಭಾನ್ವಿತ ಚೇತನ, ಅಭಿನವ ವಿವೆಕಾನಂದ ಎಂದು ಸಮಾಜ ಕರೆಯುತ್ತಿದೆ.
ವಿಶ್ವದ ಪ್ರಪ್ರಥಮ ಮಹಿಳಾ ಮಹಾಜಗದ್ಗುರು ಪರಮಪೂಜ್ಯ ಶ್ರೀಮನ್ನಿರಂಜನ ಡಾ. ಮಾತೆ ಮಹಾದೇವಿಯವರು ಚಿನ್ಮೂಲಾದ್ರಿಯ ಚಿತ್ಕಳೆಯಾಗಿ 1946ರಲ್ಲಿ ಜನ್ಮಿಸಿ, ವಿಜ್ಞಾನ ತತ್ತ್ವಜ್ಞಾನ ಸ್ನಾತಕೋತ್ತರ ಪದವೀಧರೆಯಾಗಿ 1966ರಲ್ಲಿ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಲಿಂಗೈಕ್ಯ ಲಿಂಗಾನಂದ ಸ್ವಾಮಿಜಿಗಳಿಂದ ಜಂಗಮ ದೀಕ್ಷೆ ಪಡೆದು, “ಮಾತೆ ಮಹಾದೇವಿ” ಎಂಬ ಅಭಿಧಾನ ತಾಳಿ, 1970ರಲ್ಲಿ ವಿಶ್ವ ವಿನೂತನ ಸ್ತ್ರೀ ಜಗದ್ಗುರು ಪೀಠವನ್ನಲಂಕರಿಸಿ, ಭಕ್ತಿ-ಜ್ಞಾನ-ವಿರಕ್ತಿಗಳ ದಿವ್ಯ ಸಂಗಮವಾಗಿ ಶೋಭಿಸಿದರು. ಕಿರಿದಾದ ವಯಸ್ಸಿನಲ್ಲಿಯೇ ಹಿರಿದಾದ ಜ್ಞಾನ ಗಳಿಸಿ, ಜಗದ ಜಾಗೃತಿಗಾಗಿ ಆ ಜ್ಞಾನಸುಧೆಯನ್ನು ಪ್ರವಚನ, ಗ್ರಂಥಗಳ ಮೂಲಕ ಜನತೆಗೆ ಧಾರೆಯೆರೆದಿದ್ದಾರೆ. ಶ್ರೀ ಮಾತಾಜಿಯವರ ಮೊದಲ ಕಾದಂಬರಿ “ಹೆಪ್ಪಿಟ್ಟ ಹಾಲು” ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಜಗನ್ಮಾತೆ ಅಕ್ಕಮಹಾದೇವಿಯವರ ಜೀವನ ಕುರಿತಾತ “ತರಂಗಿಣಿ” ಮಾತಾಜಿಯವರ ಹಸ್ತದಲ್ಲಿ ರೂಪುಗೊಂಡ ದ್ವಿತೀಯ ಕಾದಂಬರಿ.
ಬಸವಣ್ಣ ಹಾಗೂ ಸಮಕಾಲೀನ ಶರಣ, ಶರಣೆಯರ ಬದುಕು, ತತ್ವಗಳನ್ನು ಪ್ರವಚನ ಎಂಬ ಜಂಗಮ ಕಾಯಕದ ಭಿತ್ತರಿಸುತ್ತಿರುವ ಕೂಡಲಸಂಗಮ ಬಸವ ಧರ್ಮ ಪೀಠದ ಮೂರನೇ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಡಾ. ಮಾತೆ ಗಂಗಾದೇವಿಯವರು ಬೀದರ ಜಿಲ್ಲೆಯ ಚಟ್ನಳ್ಳಿ ಗ್ರಾಮದಲ್ಲಿ ಅಕ್ಟೋಬರ್ 16, 1958 ರಂದು ಜನಿಸಿದರು.
ಶರಣ. ಮಾಣಿಕ್ಯಪ್ಪ ಬೆಣ್ಣೆ, ಶರಣೆ. ಭಾಗೀರಥಿಬಾಯಿ ದಂಪತಿಗಳ ಮಗಳಾಗಿ ಜನಿಸಿದ ಗಂಗಮ್ಮನಿಗೆ ಪೂಜ್ಯಶ್ರೀ ಮಹಾಜಗದ್ಗುರು ಡಾ.ಮಾತೆ ಮಹಾದೇವಿ 16 ಜುಲೈ 1979 ರಂದು ಜಂಗಮ ದೀಕ್ಷೆ ನೀಡುವ ಮೂಲಕ ಮಾತೆ ಗಂಗಾದೇವಿ ಎಂದು ನಾಮಕರಣ ಮಾಡಿದರು.
ಪೂಜ್ಯಶ್ರೀಮನ್ ನಿರಂಜನ ಮಹಾಜಗದ್ಗುರು ಲಿಂಗಾನಂದ ಸ್ವಾಮೀಜಿ ಹಾಗೂ ಮಾತಾಜಿಯ ಆಧ್ಯಾತ್ಮಿಕ ಪರಿಸರದಲ್ಲಿ ಬೆಳದ ಮಾತೆ ಗಂಗಾದೇವಿ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತತ್ವ ಸಿದ್ಧಾಂತದ ಮೂಲಕ ಮುನ್ನಡೆಯುತ್ತಿದ್ದಾರೆ.