ಅಕ್ಕಮಹಾದೇವಿ ಅನುಭಾವ ಪೀಠ, ಧಾರವಾಡ
ಬೀದರ್ ಜಿಲ್ಲೆಯಲ್ಲಿರುವ ಬಸವ ಕಲ್ಯಾಣವು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿತ್ತು. ಲಿಂಗದೇವನ ಅನುಗ್ರಹವಾಗಿ ಇಷ್ಟಲಿಂಗದ ಪರಿಕಲ್ಪನೆ ಮೂಡಿ ಧರ್ಮಪೀತರು ಲಿಂಗಾಯತ ಧರ್ಮದ ರೂಪು ರೇಷೆ ಹಾಕಿದುದು ಕೂಡಲಸಂಗಮದಲ್ಲಿ ಆ ನೀಲನಕ್ಷೆಯು ಕಾರ್ಯರೂಪಕ್ಕೆ ಬಂದುದು ಬಸವ ಕಲ್ಯಾಣದಲ್ಲಿ. “ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಸಂಗನ ಬಸವಣ್ಣ ಬಂದು ಕಲ್ಯಾಣದಲ್ಲಿ ಮಹಾಮನೆಯ ಕಟ್ಟಿದಡೆ ಮತ್ರ್ಯಲೋಕವೆಲ್ಲವೂ ಭಕ್ತಿ ಸಾಮ್ರಾಜ್ಯವಾಯಿತು” ಎಂದು ಬಸವಯೋಗಿ ಸಿದ್ಧರಾಮೇಶ್ವರರು ಹೆಳುವಂತೆ, “ಅಯ್ಯಾ, ಭಕ್ತಿಗೆ ಬೀಡಾದುದು ಕಲ್ಯಾಣ 36 ವರ್ಷ, ಅನುಭವಕ್ಕೆ ಶಿವಸದನವಾದುದು 27 ವರ್ಷ” ಎಂದು ಧರ್ಮಪಿತರು ಸಾರುವಂತೆ ಬಸವಕಲ್ಯಾಣವು ವಿಕ್ರಮನಾಮ ಸಂವತ್ಸರ (ಕಿ.ಶ.1160)ದಿಂದ ರಾಕ್ಷಸನಾಮ ಸಂವತ್ಸರ (ಕಿ.ಶ. 1196)ದ ವರೆಗೆ ವಿಶ್ವಗುರು ಬಸವಣ್ಣನವರ ಪರುಷ ಪಾದದಿಂದ ಭಕ್ತಿಯ ಬೀಡಾಗಿತ್ತು. ಈ ಪವಿತ್ರ ಶರಣ ಭೂಮಿಯು ಇಂದು ನಮಗೆಲ್ಲ ಧರ್ಮ ಭೂಮಿ. ಇಂಥ ಸುಕ್ಷೇತ್ರದಲ್ಲಿ ಒರ್ಷಕ್ಕೊಮ್ಮೆಯಾದರೂ ಬಸವ ಭಕ್ತರು ಸಮಾವೇಶವಾಗಬೇಕೆಂದು 2002ನೇ ಇಸವಿಯಿಂದಲೂ “ಕಲ್ಯಾಣ ಪರ್ವ” ಎಂಬ ವಾರ್ಷಿಕ ಉತ್ಸವವನ್ನು ಅಲ್ಲಮಪ್ರಭು ಶೂನ್ಯ ಪೀಠದ ಪೀಠಾರೋಹಣ ಮಾಡುವ ಮೂಲಕ ಪ್ರತಿ ವರ್ಷ ಅಕ್ಟೋಬರ್ 11, 12 ಮತ್ತು 13ರಂದು ನಡೆಸಲಾಗುತ್ತಿದೆ. ಪೂಜ್ಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿಯವರು ಇಲ್ಲಿನ ಪೀಠಾಧಿಕಾರಿಗಳಾಗಿದ್ದಾರೆ.
ಕಲ್ಯಾಣ ಪರ್ವದಲ್ಲಿ ಮೋದಲನೆಯ ದಿನ ಬೆಳಿಗ್ಗೆ 10:30ಕ್ಕೆ ಉದ್ಘಾಟನೆ ಮತ್ತು ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ 3:30 ರಿಂದ 5:30ರ ವರೆಗೆ ರಾಷ್ಟ್ರೀಯ ಬಸವ ದಳದ ಮಹಾ ಸಮಾವೇಶ, ಸಂಜೆ 6:30 ರಿಂದ ಚಿಂತನಗೋಷ್ಠಿ. ಎರಡನೆಯ ದಿನ ಬೆಳಿಗ್ಗೆ 7:30ಕ್ಕೆ ಶರಣ ವಂದನೆ-ಶರಣರಿಗೆ ಶರಣು ಶರಣಾರ್ಥಿ, ಬೆಳಿಗ್ಗೆ 10:30ಕ್ಕೆ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ 3:30 ರಿಂದ 5:30ರ ವರೆಗೆ ಆಶುಭಾಷಣ ಸ್ಪರ್ಧೆ, ಸಂಜೆ 6:30 ರಿಂದ ಚಿಂತನಗೋಷ್ಠಿ. ಮೂರನೇ ದಿನ ಅಕ್ಕನಾಗಲಾಂಬಿಕೆ ಸಂಸ್ಮರಣೆಯ ನಿಮಿತ್ತ ಬಸವ ಧರ್ಮ ವಿಜಯೋತ್ಸವ ಕಾರ್ಯಕ್ರಮ ನಂತರ ಅಲ್ಲಮಪ್ರಭು ಶೂನ್ಯ ಪೀಠಾರೋಹಣ ಮತ್ತು ಸಮಾರೋಪ ಸಮಾರಂಭ ನಡೆಯುತ್ತದೆ.